ಲೀಲಾವತಿ 2

(1938- ). ಕನ್ನಡ ಚಿತ್ರರಂಗದ ಆರಂಭಕಾಲದ ಪ್ರಮುಖ ನಾಯಕಿ ನಟಿಯರಲ್ಲೊಬ್ಬರು. 1938ರಲ್ಲಿ ಮಂಗಳೂರಿನಲ್ಲಿ ಜನಿಸಿದರು. ಮೂರು ವರ್ಷದವರಾಗಿದ್ದಾಗಲೆ ಎಂ.ವಿ. ಸುಬ್ಬಯ್ಯನಾಯ್ದು ಅವರ ಕಂಪನಿ ನಾಟಕದಲ್ಲಿ ಪಾತ್ರ ವಹಿಸಿದರು. ಇವರು ಕಂಪನಿ ನಾಟಕಗಳಲ್ಲಿ ಜನಪ್ರಿಯ ನಾಯಕಿಯಾಗಿದ್ದ ಕಾಲದಲ್ಲೇ ಭಕ್ತಪ್ರಹ್ಲಾದ ಚಿತ್ರದಲ್ಲಿ ಹಾಸ್ಯ ಪಾತ್ರ ಮಾಡುವ ಮೂಲಕ ಚಲನಚಿತ್ರರಂಗವನ್ನು ಪ್ರವೇಶಿಸಿದರು. ಮಾಂಗಲ್ಯಯೋಗ ಚಿತ್ರದಲ್ಲಿ ನಾಯಕಿ ನಟಿಯಾಗಿ ಕಾಣಿಸಿಕೊಂಡ ಲೀಲಾವತಿ ಆನಂತರದಲ್ಲಿ ಕನ್ನಡ ಚಿತ್ರರಂಗದ ಮೇರುನಟ ರಾಜಕುಮಾರ್ ಅವರೊಂದಿಗೆ ಅಭಿನಯಿಸಿದ 42 ಚಿತ್ರಗಳಲ್ಲಿ, 20ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದರು. ಮೊದಲಿನಿಂದಲೂ ಕನ್ನಡ ಚಿತ್ರರಂಗ ನಟಿಯರ ಕೊರತೆಯನ್ನು ಎದುರಿಸುತ್ತಿತ್ತು. ಆ ಕೊರತೆ ನೀಗಿದವರು ಲೀಲಾವತಿ. ರಣಧೀರ ಕಂಠೀರವ (1960) ಚಿತ್ರದ ದುರಂತ ಪಾತ್ರದ ಮೂಲಕ ರಾಜ್‍ಕುಮಾರ್ ಅವರ ಜೊತೆ ಅಭಿನಯಿಸಿದರು. 1960ರ ದಶಕದಲ್ಲಿ ಹಾಗೂ 70ರ ದಶಕದ ಆರಂಭದಲ್ಲಿ ರಾಜ್-ಲೀಲಾವತಿ ಜೋಡಿ ಚಿತ್ರಗಳು ಬಹು ಯಶಸ್ವಿ ಚಿತ್ರಗಳಾಗಿದ್ದವು. ಪುಟ್ಟಣ್ಣ ಕಣಗಾಲ್ ಅವರು ನಿರ್ದೇಶಿಸಿದ ಗೆಜ್ಜೆಪೂಜೆ ಮತ್ತು ಶರಪಂಜರ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ರಾಣಿ ಹೊನ್ನಮ್ಮ ಚಿತ್ರದಿಂದ ಪ್ರಮುಖ ನಟಿಯಾಗಿ ಅಭಿನಯ ಕ್ಷೇತ್ರದಲ್ಲಿ ಖಾಯಂ ಆದ ಇವರು ಇಂದು ಹಾಸ್ಯ ಪಾತ್ರಗಳಿಂದ ಹಿಡಿದು ತಾಯಿ, ಅಜ್ಜಿ ಪಾತ್ರಗಳಲ್ಲಿ ಕನ್ನಡ, ತೆಲಗು, ತಮಿಳು ಚಿತ್ರರಂಗಗಳಲ್ಲಿ ಚಿರಪರಿಚಿತರು. ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರೂ ಆ ಪಾತ್ರಕ್ಕೆ ಜೀವತುಂಬಿ ಪ್ರೇಕ್ಷಕರ ಮನಸೂರೆ ಗೊಳ್ಳುವ ಶಕ್ತಿ ಇವರಿಗಿದೆ. ಇವರ ಮಗ ವಿನೋದ್‍ರಾಜ್ ನೃತ್ಯ ಪಟು. ಡಾನ್ಸ್ ರಾಜಾ ಡಾನ್ಸ್ ಮೂಲಕ ನಾಯಕನಟರಾಗಿ ಬಂದರು. ಮಗನಿಗಾಗಿ ಕಾಲೇಜು ಹೀರೋ, ಮುಂತಾದ ಕೆಲವು ಚಲನ ಚಿತ್ರಗಳನ್ನು ನಿರ್ಮಿಸಿದ್ದಾರೆ. ಲೀಲಾವತಿ ನಟಿಸಿರುವ ಮುಖ್ಯ ಚಿತ್ರಗಳು ಭಕ್ತಪ್ರಹ್ಲಾದ (1958), ಮಾಂಗಲ್ಯ ಯೋಗ (1959), ಧರ್ಮ ವಿಜಯ (1959), ಜಗಜ್ಯೋತಿ ಬಸವೇಶ್ವರ (1959), ಅಬ್ಬಾ ಆ ಹುಡುಗಿ (1959), ರಾಣಿ ಹೊನ್ನಮ್ಮ (1960), ಕಣ್ತೆರೆದು ನೋಡು (1961), ಕಿತ್ತೂರ ಚೆನ್ನಮ್ಮ (1961), ಗಾಳಿಗೋಪುರ (1962), ಕರುಣೆಯೆ ಕುಟುಂಬದ ಕಣ್ಣು (1962), ವಿಧಿವಿಲಾಸ (1962), ವಲರ್ ಪಿರೈ (1962), ಸುಮೈ ತಂಗೈ (1962), ನಂದಾದೀಪ (1963), ಮಲ್ಲಿ ಮದುವೆ (1963), ಕುಲವಧು (1963), ವೀರಕೇಸರಿ (1963), ಬಂಡಿಪೋಟು (ತೆಲುಗು) ಸಂತ ತುಕಾರಾಮ್ (1963), ತುಂಬಿದ ಕೊಡ (1964), ಚಂದ್ರಹಾಸ (1965), ತೂಗುದೀಪ (1966), ಮೋಹಿನಿ ಭಸ್ಮಾಸುರ (1966), ಗಂಗೆಗೌರಿ (1967), ಭಾಗ್ಯ ದೇವತೆ (1968), ಅಣ್ಣ ತಮ್ಮ (1968), ಕಲ್ಪವೃಕ್ಷ (1969), ಗೆಜ್ಜೆಪೂಜೆ (1970), ಬೋರೆಗೌಡ ಬೆಂಗಳೂರಿಗೆ ಬಂದ (1970), ಶರಪಂಜರ (1971), ಸೋತು ಗೆದ್ದವಳು (1971), ನಾಗರಹಾವು (1972), ಸಹಧರ್ಮಿಣಿ (1973), ಉಪಾಸನೆ (1974), ಭಕ್ತಕುಂಬಾರ (1974), ಕಥಾಸಂಗಮ (1975), ಅವರಗಳ್ (1979) ಮೊದಲಾದವು.

1979ರ ಅನಂತರದಲ್ಲಿ ಇವರು ಹೆಚ್ಚಾಗಿ ತಾಯಿ ಪಾತ್ರಗಳಲ್ಲಿ ಕಾಣಿಸಿಕೊಳ್ಳತೊಡಗಿದರು. ಶರಪಂಜರದಿಂದ ಪ್ರಾರಂಭವಾದ ಪೋಷಕ ಪಾತ್ರ ನಿರ್ವಹಣೆ ಅನಂತರದಲ್ಲಿ ಖಾಯಂ ಆಯಿತು. ರಾಜಕುಮಾರ್ ಚಿತ್ರಗಳಿಂದ ಹಿಡಿದು ಇಂದಿನ ಕನ್ನಡ ನಾಯಕ ನಟರ ತಾಯಿಯಾಗಿ, ಅಜ್ಜಿಯಾಗಿ ಇವರು ಅಭಿನಯಿಸುತ್ತಿದ್ದಾರೆ.	 ಗೆಜ್ಜೆಪ್ರಜೆ, ಸಿಪಾಯಿರಾಮು, ಮಹಾತ್ಯಾಗ, ಡಾಕ್ಟರ್‍ಕೃಷ್ಣಗಳಲ್ಲಿನ ಅಮೋಘ ಅಭಿನಯಕ್ಕಾಗಿ ಲೀಲಾವತಿಯವರಿಗೆ ರಾಜ್ಯಪ್ರಶಸ್ತಿ ಲಭಿಸಿದೆ.  ಚಿತ್ರೋದ್ಯಮಕ್ಕೆ ಸಲ್ಲಿಸಿರುವ ಸೇವೆಗಾಗಿ ಗುರುತಿಸಿ ಲೀಲಾವತಿಯವರಿಗೆ 1990-2000 ವರ್ಷದ ಡಾ|| ರಾಜಕುಮಾರ್ ಪ್ರಶಸ್ತಿ ದೊರೆತಿದೆ.			
 *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ